ಅರಳು

Friday, August 27, 2010

ಚಳಿಯ ಬೆಟ್ಟದ ಸಂತನ ಮಾತು



(ಕನಸು: ಒಂದು- ನಿನ್ನನ್ನೇ ಕಾಯುತಿರುವೆ ಮಗುವೆ)

ನದಿ-ಬೆಟ್ಟಗಳಿನ್ನು ತಮ್ಮ ರೂಪಗಳ ಪಡೆಯುವ ಮೊದಲಿನ ಕಾಲದಿಂದಲೂ ನಿನ್ನನ್ನೇ ಕಾಯುತಿರುವೆ ಮಾಣಿ. ನೀನು ಗಾಢ ನಿದ್ರೆ, ಕನಸುಗಳಲ್ಲಿ ಲೀನವಾಗಿರುವಾಗಲೂ ನನಗೆ ನಿನ್ನದೆ ಚಿಂತೆ- ನಿನ್ನ ಬರುವಿಕೆ ಪ್ರತಿದಿನ ದಶದಿಕ್ಕುಗಳಲಿ ಮೊಳಗುವ ಶಂಖನಾದದಷ್ಟೇ ಖಚಿತವಾಗಿದ್ದರೂ. ನಮ್ಮ ಪುರಾತನ ಬೆಟ್ಟಗಳಲಿಯೇ ಬೇರುಗಳ ಬೆಳೆಯಬಿಟ್ಟು, ದೂರದ ನಾಡುಗಳಲ್ಲಿ ಹರಿದಾಡುವ ಸಾವಿರಾರು ಹಾದಿಗಳಲಿ ಕಣ್ಣುಹಾಯಿಸಿದಾಗ ನಿನ್ನ ಹೆಜ್ಜೆ ಗುರುತುಗಳು ಎಲ್ಲೆಲ್ಲಿಯೂ ಕಾಣುತಿವೆ. ನೀನೆಲ್ಲಿ ಹೆಗುತಿರುವೆ? ಕೆಲವೊಮ್ಮೆ ಮಂಜುಮುಸುಕಿ ಬೆಟ್ಟದ ಹಳ್ಳಿಗಳೆಲ್ಲ ಮರೆಯಾಗುವುದುಂಟು. ಆ ಮುಸುಕಿನ ಮಾತು ಹೇಗೂ ಇರಲಿ, ನೀನೇಕೆ ದೂರದ ನಾಡುಗಳಲ್ಲಿ ದಿಕ್ತಟ ತಪ್ಪಿ ಅಲೆಯುತಿರುವೆ? ನಿನ್ನ ದಾರಿ ಕಳೆದುಹೆಗಿದ್ದರೂ ನನ್ನೆಡೆಗೆ ಬರುವೆಯೆಂಬ ನಂಬಿಕೆಯಲ್ಲಿ ಪ್ರತಿ ಉಸಿರಿಗೂ ನಿನ್ನ ಹೆಸರನು ಜಪಿಸಿರುವೆ; ನಾನೋರ್ವ ಅಪರಿಚಿತನೆಂಬಂತೆ ನೋಡುವೆಯಲ್ಲ, ಅನುಮಾನವೇನು? ಹಿಂದಿನ ಕೊಡುಕೊಳೆಗಳ ತಂತುಗಳ ವಿಚಾರ ನೀನರಿಯಲಾರೆ; ನೀಡಿದ ವಚನವ ನೆನಪಿಸಿಕೊಳ್ಳಲಾರೆ. ನನ್ನನ್ನು ಗುರುತಿಸಲೂ ಆರೆ. ಸಾಕ್ಷಿ ನೀಡುವೆ ನೋಡು: ಈ ಪುರಾತನ ದೇವದಾರು ಮರದ ಬುಡದಲ್ಲಿ ನಾವಿಬ್ಬರೂ ದೀರ್ಘಕಾಲ ಕಳೆದಿದ್ದೇವೆ. ಗಾಳಿಯ ಮರ್ಮರ ಮೃದುವಾಗಿ ನಮ್ಮನ್ನು ಕರೆಯವುದನ್ನು ಕೇಳುತ್ತ, ಸರಿದುಹೋಗುವ ಮೋಡಗಳ ನೋಡುತ್ತ, ಜತೆಜತೆಯಾಗಿ ನಡೆದಾಡಿ ಖುಷಿಪಟ್ಟಿದ್ದೇವೆ. ಗಂಟೆಗಟ್ಟಲೆ ಮೌನವಾಗಿ ಅಕ್ಕಪಕ್ಕದಲ್ಲಿ ನಿಂತಿದ್ದೇವೆ. ನೀನು ಮಾಗಿಯ ಮೊದಲ ಕೆಂದೆಲೆಯ ನನಗೆ ನೀಡಿದಾಗ ಅದರ ಮೂಲವನ್ನು ನಿನಗೆ ಅರಹುವಂತೆ ನಾನು ಕಾಡಿನೊಡಲನ್ನು ನಿನಗೆ ಪರಿಚಯಿಸಿದ್ದೆ. ನಾವೆಲ್ಲೆ ಹೆದರೂ, ಚಂದ್ರತಾರೆಯರು ಎಟಕುವ ಈ ಪುರಾತನ ಬೆಟ್ಟವೇ ನಮ್ಮ ಸ್ವಸ್ಥಾನವೆಂದು ಇಲ್ಲಿಗೇ ಮರಳಿಬರುವುದಾಗಿ ವಾಗ್ದಾನ ಮಾಡಿದ್ದೆವು. ಬದುಕಿರುವ ಸಮಸ್ತ ಜೀವಿಗಳೂ ಎಚ್ಚರಗೊಳ್ಳಲು ದೇಗುಲದ ಬೃಹತ್ ಗಂಟೆಯನು ಪ್ರತಿದಿನ ಸರದಿಯ ಮೇಲೆ ಬಾರಿಸುವ ಪಣ ತೊಟ್ಟಿದ್ದೆವು.

ಬಿದಿರು ಕಾಡಿನ ಮಹಾಗುರುವಿನ ಸನ್ನಿಧಿಯಲ್ಲಿ ಚಳಿಯ ಬೆಟ್ಟದಲಿ, ಅರಳಿದ ಅರಳಿ ಹೂಗಳ ನಿರುಕಿಸುತ ಇಬ್ಬರೂ ಮೌನವಾಗಿ ಕೂತು ಕಳೆದ ಕಾಲವೆಷ್ಟೋ. ಗುರುವಿನಣತಿಗೆ ಓಗೊಟ್ಟು ಕಡಲಮಕ್ಕಳನು ಪ್ರವಾಹದಿಂದ ಪಾರಾಗಿಸಲು ದೋಣಿಗಳ ತಲೆಯ ಮೇಲೆ ಹೊತ್ತು ಸಾಗಿದ ಸಂದರ್ಭಗಳೆಷ್ಟೋ. ಕಿವಿ ಕಿವುಡಾಗಿಸುವ ನದಿಯ ಭೋರ್ಗರೆತವನ್ನು ಧ್ಯಾನದ ಸ್ಥಿತಿಯಲ್ಲಿ ಇರುಳಿಡೀ ಆಲಿಸಿದ ಸಮಯವದೆಷೆ. ವರ್ಷಾನುವರ್ಷದ ಸಾಧನೆಯ ಬಳಿಕ ಕಾಲದ ಜೇಡರಬಲೆಯ ಪದರುಗಳನ್ನು ಬೇಧಿಸಲು ಜತೆಯಾಗಿ ದಾರಿಗಳ ಸೃಷ್ಟಿಸಿ ಅಗಾಧ ವ್ಯೋಮದಾಚೆ ಅವಕಾಶದಲ್ಲಿ ಇಳಿದಿದ್ದೇವೆ. ದಶಕಗಳ ಕಾಲ ಅಲೆಮಾರಿಗಳಾಗಿದ್ದವರಿಗೆ ಮನೆ ತಲುಪಿಸಲು, ಚುಕ್ಕೆಗಳು ಚೆಲ್ಲುವ ಬೆಳಕನ್ನು ನಮ್ಮ ಅಂಗೈಯಲ್ಲಿ ದೊಂದಿಯಾಗಿಸಿ ದಾರಿ ತೋರಿದ್ದೇವೆ. ವಿಸ್ಮೃತಿಯೇ? ದಿಕ್ಕಿರದ ಅಲೆಮಾರಿತನದ ಬೀಜಗಳಿನ್ನೂ ನಿನ್ನಲಿ ಬೇರೂರಬಲ್ಲ ಕಾಲವೂ ಇರುತ್ತದೆ ಎಂದು ಅರಿವು ಅರುಹಿರಲಿಲ್ಲವೆ? ನೀನು ಮತ್ತೆ ಜೀವಜಂಜಾಟದ ಚಕ್ರದ ಸುಳಿಯಲ್ಲಿ ಸಿಲಿಕಿರುವೆ. ನಿನ್ನ ಗುರಿ, ಗುರು, ಸೋದರ-ಸೋದರಿಯರನ್ನು ತೊರೆದು ಏಕಾಂಗಿಯಾಗಿರುವೆ.

ಚಿಂತಿಸದಿರು- ನಿನ್ನ ದೇಹದ ಕಣಕಣದಲ್ಲೂ ನಾನಿರುವೆ. ಹೆಜ್ಜೆ ತಪ್ಪಿದಾಗಲೆಲ್ಲ ನಾನೇ ನಿನಗೆ ಊರಗೋಲು. ಈಗಿನದು ನಿಜವಾದ ಅಗಲಿಕೆಯಲ್ಲವೆಂದು ಅರಿತು ಅನುರಾಗ ನಿನ್ನನ್ನು ಕೈಬಿಡದಂತೆ ಕಾಯುತಿರುವೆ. ಮರಭೂಮಿಯ ಸುಡು ಮರಳಲ್ಲಿ ಎಚ್ಚರತಪ್ಪಿದಾಗ ತಂಪು ನೀಡುವ ಮೋಡವಾಗಿ ನಿನಗೆ ನೆರವಾಗುವೆ; ಆ ಮೋಡ ನಟ್ಟಿರುಳಲ್ಲಿ ಜೇನಹನಿಯಾಗಿ ಹನಿದು ನಿನ್ನ ಹಸಿವೆಯ ತಣಿಸುವುದು. ಕೆಲವೊಮ್ಮೆ ಇರುಳ ಕತ್ತಲೆಯ ವ್ಯೂಹದಲಿ ನಿನ್ನ ನಿಜವಾದ ಮನೆಮರೆತು ಕಳೆದುಹೆದಾಗ ಆಕಾಶದ ನೀಲಿಯಾಚೆಯ ಅವಕಾಶದ ಭೋರ್ಗರೆತ ಆಲಿಸಲೆಂದು ಬೆಳಕಿನ ಏಣಿಯಾಗಿ ಬರುವೆ.

ಆದರೂ ಮಗುವೇ, ಅಂತಿಮವಾಗಿ ಅಲೆಮಾರಿತನ ತೊರೆದು ಹಕ್ಕಿಗಾನವ ಆಲಿಸಲು, ಬೆಟ್ಟದ ನೆತ್ತಿಯಲಿ ನಿಂತು ಅರಿವಿನ ಗುರುವಿನ ಕಂಗಳಂತೆ ಹೆಳೆವ ಬೆಳಗಿನ ನೇಸರನನ್ನು ನೋಡಲು, ಹೂಬಿಟ್ಟು ದುಂಬಿಗಳಿಂದ ತುಂಬಿರುವ ಹೂತೋಟ ನಿರುಕಿಸಲು; ಬೆಟ್ಟದಾಚೆ ಕಾನನದಲ್ಲಿ ಪ್ರತಿಋತುಮಾನವೂ ಅರಳಿ, ಘಮಿಸಿ, ಉದುರಿ ಮತ್ತೆ ಅರಳಬಲ್ಲ ನಿತ್ಯಹಸಿರೆಲೆಯ ಕಾಡಿನ ಮರ್ಮರ ಕೇಳಲು ಈ ಪುರಾತನ ತಂಪುಕಣಿವೆಯ ಬೆಟ್ಟಕೆ ನೀನು ಬರಲೇ ಬೇಕಿದೆ.

(ಕನಸು: ಎರಡು- ಮಹಾಕರುಣೆ: ಗುರುವಿನ ಮಾತು)


ತರುಣನಾಗಿದ್ದಾಗಿನಿಂದಲೂ ಅನುಕಂಪದ ವಿವಿಧ ನೆಲೆ ಅರಿಯಲು ಪ್ರಯತ್ನಿಸಿರುವೆ. ಆದರೆ ನಾನು ತುಸುವಾದರೂ ಕಲಿತಿರುವ ಕರುಣೆಯು ಬಂದಿರುವುದು ನನ್ನ ಬೌದ್ಧಿಕ ಆವಿಷ್ಕಾರದಿಂದಲ್ಲದೆ ನಿಜವಾದ ಯಾತನೆಯ ಅನುಭವದಿಂದ. ತಪ್ಪಿನಿಂದ ಹಾವನ್ನು ಹಗ್ಗವನ್ನಾಗಿ ಮಾಡಿಕೊಂಡ ವ್ಯಕ್ತಿಯ ಭಯದಂತೆ ನಾನು ನನ್ನ ದುಃಖಕ್ಕಾಗಿ ಹೆಮ್ಮೆಯನ್ನು ಪಡಲಾರೆ. ನನ್ನ ಯಾತನೆಯು ಕೇವಲ ಹಗ್ಗ ಮಾತ್ರವಾಗಿದ್ದು, ಮಹತ್ವವಿರದ, ಕೇವಲ ಶೂನ್ಯದ ಹನಿಯಾಗಿದ್ದು ಬೆಳಗಲ್ಲಿ ಕರಗಿಹೋಗಬೇಕಾದ ಇಬ್ಬನಿಯಾಗಿದೆ. ಆದರೆ ಅದು ಕರಗಿಲ್ಲ; ಆದ್ದರಿಂದಲೇ ಅದರ ತಾಪವನ್ನು ತಾಳದಷ್ಟು ನಾನು ಅಸಹನೀಯನಾಗಿದ್ದೇನೆ. ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟುತ್ತಿರುವ ನನ್ನ ಯಾತನೆಯನ್ನು ನನ್ನ ಅರಿವಿನ ಗುರು ಕಾಣುತ್ತಿಲ್ಲವೆ? ಕಂಡರೆ, ಹೇಗೆ ಆತ ಮಂದಸ್ಮಿತನಾಗಿರಲು ಹೇಗೆ ಸಾಧ್ಯ? ನರಜೀವಿಗಳ ಕೊನೆಯಿರದ ಎಲ್ಲ ದುಃಖವನ್ನು ನೋಡಿದರೂ ಆ ಕುರಿತು ಆಳವಾದ ಅನುಕಂಪ ಹರಿಸುವುದರ ಬದಲು ಆತನೇಕೆ ಕಮ್ಮಗೆ ಕುಳಿತು ನಗುತಿರುವ? ಆ ಕುರಿತು ಚಿಂತೆಗೆ ಬೀಳುವೆ. ಅನಂತರ ಆತ ನಗುತ್ತ ಕುಳಿತಿರುವಂತೆ ಮೂರ್ತಿಯಾಗಿ ಕೆತ್ತಿರುವುದು ನರಮುಷ್ಯರಾದ ನಾವೇ ಎಂದು ಅರಿಯುವೆ. ನಾವು ಹಾಗೆ ಮಾಡಲು ಕಾರಣವೊಂದಿದೆ: ನೀನು ಹಚ್ಚಿಕೊಂಡಿರುವುದರ ಕುರಿತು ಇರುಳಿಡೀ ಯೋಚಿಸುವಾಗ ನೀನು ಕೇವಲ ಹೆರಜಗತ್ತಿನ ಹೆರಪದರಿಗೆ ಅಂಟಿರುವೆ. ವಾಸ್ತವದ ಝಳ ನಿನಗೆ ತಟ್ಟುತ್ತಿಲ್ಲ. ಆ ವಾಸ್ತವವೆಂದರೆ ಈ ಲೋಕವು ಆದಿ ಮತ್ತು ಕೊನೆಗಳಿಲ್ಲದ ಸಂಬಂಧಗಳಿಂದ ಹುಟ್ಟಿದ್ದು, ಒಂದೆಡೆ ತಟಸ್ಥಗೊಳ್ಳದೆ ಸತತವಾಗಿ ಭೋರ್ಗರೆವ ನದಿಯ ನೀರಿನಂತೆ ಪ್ರವಹಿಸುತ್ತಲೇ ಇದೆ. ಈ ಪ್ರವಾಹ ಬೆಟ್ಟಕೊರಕಲು, ಸಪಾಟುನೆಲ, ಸುಣ್ಣದ ಗಣಿ ಹೀಗೆ ಗೊತ್ತಿರದ ದಿಕ್ಕುಗಳಿ ಹರಿದು ಹೆಗಬೇಕಿದೆ. ಆಗೆಲ್ಲ ಆಯಾ ನೆಲದ ರಸವನದು ಹೀರಬೇಕಿದೆ,

ನಮ್ಮೆಲ್ಲರ ದುಃಖದ ಅನುಭವ ಅದನ್ನು ಅನುಭವಿಸುತ್ತಿರುವ ಕಾಲದ ಅನುಭವಾಗಿದೆ. ಆದರೆ ಕಾಲದ ವ್ಯಕ್ತಿತ್ವ, ಭಾವ ಯಾವಾಗಲೂ ಒಂದೇ ಆಗಿರಲಾರದು. ಬೇಕಾದವರು ಸತ್ತಾಗ ಅವರ ನಿರ್ಜೀವ ದೇಹದ ಮೇಲೆ ಬಿದ್ದು ಬಿದ್ದು ಅಳುವ ಜನ ಅವರ ಅಂತಿಮ ಸಂಸ್ಕಾರ ಮುಗಿಸಿ ಬಂದದ್ದೇ ಚುರುಗುಟ್ಟುವ ಹೆಟ್ಟೆಗೆ ಆಹಾರ ಒದಗಿಸಿ, ತಮ್ಮ ದೈನಂದಿನ ಕ್ರಿಯೆಗಳಲ್ಲಿ ನಿರತರಾಗಿಬಿಡುತ್ತಾರೆ. ಕಾಲದ ಅಂತರ ಹೆಚ್ಚಾಗುತ್ತ ಹೆದಂತೆ, ನೆನಪಿಸಿಕೊಂಡರೆ ತಮಗೇ ಭಯವಾಗುವಂತೆ ಅಂಥವರೊಬ್ಬರು ನಮ್ಮೊಡನೆ ಬದುಕಿದ್ದರು ಎನ್ನುವುದನ್ನೇ ಮರೆತುಬಿಡುತ್ತಾರೆ!

ಏಕೆಂದರೆ ವಸ್ತು, ವಿಷಯ, ಕಾಲಗಳೆಲ್ಲ ನಾವೇ ರೂಪನೀಡಿದ ಪರಿಕರಗಳಾಗಿದ್ದು ಕೇವಲ ನಮ್ಮ ಕಲ್ಪನೆಯಾಗಿವೆ. ನಮ್ಮ ಪಾಪಪ್ರಜ್ಞೆಯನ್ನು ತೊಳೆಯಲಷ್ಟೇ ಆನಂತರ ಎಲ್ಲ ಅರ್ಥಳನ್ನು ಅವಕ್ಕೆ ಆಪಾದಿಸುತ್ತೇವೆ. ಶಸ್ತ್ರಚಿಕಿತ್ಸೆಗೆಂದು ರೋಗಿಯ ದೇಹವನ್ನು ತನ್ನೆದುರು ಇಟ್ಟುಕೊಂಡಿರುವ ವೈದ್ಯನೆಂದಾದರೂ ರೋಗಿಯ ಕುಟುಂಬದವರ ಯೋಗಕ್ಷೇಮ, ಅವರ ಅನ್ನಿಸಿಕೆಗಳ ಕುರಿತು ಚಿಂತಿಸುತ್ತಾನೆಯೇ? ಅಥವ ತನ್ನ ಮುಂದಿನ ತಕ್ಷಣ ಕ್ರಿಯೆ ಬಿಟ್ಟು ಸಾಧ್ಯಸಾಧ್ಯತೆಗಳ ಗಂಟು ಬಿಚ್ಚಿ ವಿಶ್ಲೇಷಿಸುತ್ತ ಕುಳಿತುಕೊಳ್ಳುತ್ತಾನೆಯೇ? ಶಸ್ತ್ರಗಳಿಂದ ಛಿದ್ರವಾದ ದೇಹದ ರೋಗಿ ನಿಧಾನ ಚೇತರಿಸಿಕೊಳ್ಳುತ್ತಾನೆಂದು ವೈದ್ಯ ಬಲ್ಲ. ಆದ್ದರಿಂದಲೇ ರೋಗಿ ನರಳುತ್ತ ಹಾಸಿಗೆ ಹಿಡಿದಿದ್ದರೂ ಆತ ನಿರುಮ್ಮಳವಾಗಿ ನಗಬಲ್ಲ. ಆತನ ನಗುವಿಗೆ ಕ್ರೌರ‍್ಯದ ಲೇಪವಿಲ್ಲ. ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿರುವ, ಅನಗತ್ಯ ಚಿಂತೆಗಳಿಂದ ಮುಕ್ತವಾದ ನಗುವದು. ಆ ಮಹಾಕರುಣೆಯ ಬಗೆಯನ್ನು ಅಕ್ಷರಗಳಲ್ಲಿ ಒಡಮೂಡಿಸುವುದು ಹೇಗೆ? ಕಪ್ಪು ಮಣ್ಣು, ಬಿಳಿ ಇಬ್ಬನಿಗಳನ್ನು ಯಾವುದೇ ತಾರತಮ್ಯಕ್ಕೆ ಒಳಪಡಿಸದೆ, ದ್ವಂದ್ವಕ್ಕೆ ಸಿಲುಕಿಸದೆ ನೋಡಿದಾಗ ಅದು ಅಸಹ್ಯವೂ ಅಲ್ಲ; ಕಾಲಾತೀತ ಸೌಂದರ‍್ಯವೂ ಅಲ್ಲ.

ಹಾಗೆಂದರೆ ಮಹಾಕರುಣೆಯೆನ್ನುವುದು ಜೀವರಹಿತವೇ? ಹಾಗೇನಿಲ್ಲ. ಅಲ್ಲಿ, ವಸ್ತು-ವ್ಯಕ್ತಿ ನಿಷ್ಠತೆಯಿಲ್ಲ. ನಾನೆಂಬುದಕ್ಕೆ ಪ್ರತ್ಯೇಕ ಅಸ್ತಿತ್ವವಿಲ್ಲ. ದುಷ್ಟನೊಬ್ಬ ಹರಿಹಾಯುತ್ತಾನೆಯೇ, ಆತನತ್ತ ಅನುಕಂಪದ ನಗೆಬೀರಿ. ಆತ ಬೆಳೆದ ಪರಿಸರ, ಅಭದ್ರತೆ, ಆತನ ದಡ್ಡತನದಿಂದಾಗಿ ಆತ ಆ ಬಗೆಯ ಬುದ್ಧಿಹೀನ ಕೃತ್ಯದಲ್ಲಿ ತೊಡಗಿದ್ದಾನೆಂದು ಭಾವಿಸಿ. ತಾಂಡವನೃತ್ಯ ಮಾಡುತ್ತ ನಿಮ್ಮ ನಾಶಕ್ಕೆ ಸನ್ನದ್ಧನಾಗಿ ನಿಮ್ಮ ಮೇಲೆ ಅನ್ಯಾಯದ ಹೆರೆ ಹೆರೆಸಿರುವವನತ್ತ ಪ್ರೀತಿ-ಅನುಕಂಪ ತುಂಬಿದ ನೋಟದಿಂದ ನೋಡಿ. ನಿಮ್ಮ ಕಣ್ಣಿಂದ ಧಾರಾಕಾರವಾಗಿ ಕರುಣೆ ಧುಮ್ಮಿಕ್ಕಲಿ. ದೂರಿನ ಅಲೆಯಾಗಲಿ; ಕೋಪದ ನೊರೆಯಾಗಲಿ ನಿಮ್ಮ ಮನಸ್ಸಿನಲ್ಲಿ ಏಳುವುದು ಬೇಡ. ಎಂದಾದರೊಂದು ದಿನ ದುಷ್ಟನೊಬ್ಬನ ಕ್ರಿಯೆಯಿಂದ ನಾನು ಸತ್ತ ಸುದ್ದಿ ತಲುಪಿದರೆ ಕೊರಗದಿರಿ; ನಿಶ್ಚಿಂತರಾಗಿರಿ. ಏಕೆಂದರೆ, ಕೊನೆಯ ಗಳಿಗೆಯಲ್ಲಿ ನನ್ನ ಮನಸ್ಸಿನಲ್ಲಿ ಯಾವುದೇ ಬಗೆಯ ಕೋಪತಾಪದಿಂದ ನಾನು ನರಳಿರುವುದಿಲ್ಲ. ನನ್ನಿಂದಲೇ ನನ್ನ ದೇಹ ಹಿಂಸೆಗೆ ಒಳಗಾಗಿರುವುದಿಲ್ಲ. ನಿಮಗಾಗಿಯೇ ಇರುವ ನೆಮ್ಮದಿಯ ತಾಣವನ್ನು ನಿಮ್ಮಿಂದ ಯಾರೂ ಕಸಿಯಲಾಗುವುದಿಲ್ಲ. ನಿಮ್ಮ ನಂಬಿಕೆಗಳನ್ನು ಯಾರೂ ನಾಶ ಮಾಡಲಾಗುವುದಿಲ್ಲ. ಅರಿವಿನ ಗುರು ಹೇಳಿದ ಕಥೆಯೊಂದು ನೆನಪಿಗೆ ಬರುತ್ತಿದೆ:

ತನ್ನ ಅಸ್ತಿತ್ವವನ್ನು ಅಲ್ಲಗೆಲೆಯುತ್ತಿದ್ದಾನೆ ಎಂಬ ಹಮ್ಮಿನಲ್ಲಿ ಮಹಾಕರುಣಿ ಯೋಗಿಯನ್ನು ಅರಸನೊಬ್ಬ ಹಿಂಸಿಸುವ ಕಥೆಯದು. ರಾಜ ಮೊದಲು ಯೋಗಿಯ ಬೆರಳು ಕತ್ತರಿಸಿದ. ಗುರುವಿನ ನಗೆ ಮಾಯವಾಗಲಿಲ್ಲ. ಗುರುವಿನ ಕಿವಿಗಳು ಕತ್ತಿಯ ಝಳಪಿಗೆ ನೆಲಕ್ಕುದುರಿದವು. ಯೋಗಿಯ ಮುಗುಳ್ನಗೆ ವಿಸ್ತಾರವಾಯಿತು. ಗುರುವಿನ ಕಾಲಿನ ಬೆರಳುಗಳು ಮಣ್ಣನ್ನು ನೆತ್ತರಿನಿಂದ ತೋಯಿಸಿದವು: ಮಹಾಕರುಣಿ ಸಾಧಕನ ತುಟಿಗಳು ಅರಳಿಯೇ ಇದ್ದವು. ತನ್ನ ಕ್ರೌರ‍್ಯದ ಭಯಾನಕತೆಗೆ ಹೆದರಿ ತತ್ತರಗೊಂಡ ಅರಸ ಹೃದಯಸ್ತಂಬನದಿಂದ ಸತ್ತ. ಆನಂತರವು ಮಹಾಕರುಣಿ ಗುರು ದಶಕಗಳ ಕಾಲ ನೂರಾರು ಶಿಷ್ಯರಿಗೆ ಬದುಕಿನ ಕಣಿವೆ ಕಗ್ಗತ್ತಿನ ದಾರಿಯಲಿ ಬೆಳಕು ಕಾಣುವ ಬಗೆಯ ಕುರಿತು ಬೋಧನೆ ಮಾಡುತ್ತಲೇ ಇದ್ದ.

(ಕಥೆಗಾರನ ಕನಸಿನಲ್ಲಿ ಬಂದು ಕರೆಯುವ ಅರಿವಿನ ಗುರುವಿನ ಮಾತುಗಳು)